ಸೋಮವಾರ, ಫೆಬ್ರವರಿ 6, 2023

ಬರೆವ ಪದಗಳೆಲ್ಲ ಓದಬೇಕೇನೋ?
ಬದುಕ ಪದಗಳೇ ಸಾಕಲ್ಲವೇ..?
ಮತ್ತೇಕೆ ಹುಡುಕಿ ತೆಗೆಯುವೆ ಚೆಲುವೆ
ಬರೆಯದ ಪದಗಳು ಕವಿತೆಗಳಲ್ಲವೇ
ನಿನ್ನಲ್ಲಿ ಅವುಗಳು ಅವಿತ್ತಿಲ್ಲವೇ..?
ನಿದ್ರೆಯ ಬಿಡದಿರು ನೀರೆ
ಹೊಳೆಯುವ ರಾಶಿ ತಾರೆ..
ಭದ್ರವಾಗಿರುವ ಕನಸುಗಳು
ನಿನ್ನ ನಂಬಿರುವ ಮನಸ್ಸುಗಳು 
ಕಾದಿವೆ ನೋಡು ಬಾನೆತ್ತರದಲಿ
ಜಾರಿ ಬೀಳದಿರಲಿ ಮಳೆ ಹನಿಯಲಿ..

ಬುಧವಾರ, ಆಗಸ್ಟ್ 25, 2021

ಕಟ್ಟುತಿರುವುದು ಗೆದ್ದಲು 
ಬೇರುಗಂಟಿಯ ಸುತ್ತಲು
ಮಣ್ಣ ರಾಶಿಯಗೂಡುತಾ
ನೆರಳಾಗುವುದೆಂದು
ಹುತ್ತವನು
ಬಂದು ಸೇರುತಿವೆ
ವಿಷದ ಹಾವುಗಳು
ಕೆಡವಲಾಗುತಿದೆ
ಕಟ್ಟಿದಾ ನಂಬಿಕೆಯ
ಎತ್ತರವನು

ಜೀವ ಸವೆಸಿದ
ದಣಿದ ದೇಹಗಳು
ನೂರು ಚಿಂತನೆ
ಏಕ ತತ್ವವು
ಮಣ್ಣಾಗುತಿವೆ
ಮೇಲೆ ನೋಡುತಾ
ಕೆಳಗೆ ಭಯದಲಿ
ಅಡಗಿ ಕುಳಿತ
ಆಸೆಗಳೆಲ್ಲವು
ಹಣ್ಣಾಗುತಿವೆ

ಯಾರು ಬಂದರೇನಂತೆ
ನಗುತಿವೆ ಮೋಡಗಳು
ಮುಳುಗುತಿವೆ ಬದುಕು
ಮತ್ತೆ ನೆನಪಾಗುತ್ತಿದೆ
ಆ ಸಾಲು 
ನೀನಾರಿಗಾದೆಯೋ ಎಲೆ ಮಾನವ!

ಭಾನುವಾರ, ಡಿಸೆಂಬರ್ 6, 2020

ನೀ ಕಳುಹಿದ ಪತ್ರಕ್ಕೆ 
ಬರೆಯದ ಉತ್ತರ
ಮನದಲ್ಲೇಕೊ ಜಿನುಗುತಿದೆ
ಭಾಷೆಯ ಭಾವ
ನಿರಾಸೆಯಾಗದೆ
ಉಳಿಯಲಿ ನಿನ್ನ ಹೃದಯದಲಿ

ಹರಿಯುವ ಮಳೆಯಲಿ
ಕಾಗದ ದೋಣಿಯಲಿ
ನಾ ಬರೆದ ಸಾಲುಗಳೆಲ್ಲ ಪ್ರೀತಿಗಿದೆ
ತೇಲಿದೆ ನೋಡು 
ತೆರೆಯದೆ ಕಾಣು 
ಆ ಒಲವಿನ ನಿಜ ಆನಂದವನು

ಚೆಲುವಿಗೆ ಹೆಸರು 
ಜೀವಕ್ಕೆ ಉಸಿರು
ಪದೇ ಪದೇ ನನ್ನ ಕರೆಯದಿರು
ಸಂಗಡ ದಾರಿಯ
ಮರೆತ ಸಂಚಾರಿಯ
ದೂರದಿ ನೋಡಿ ನಗುತಿರು..

ಶನಿವಾರ, ನವೆಂಬರ್ 28, 2020

ಬೆರಳ ಬಿಗಿದಿರಲು ಸಲುಗೆ
ಮೌನದೊಳಗಿನ ಪಯಣ
ಮುಗುಳುನಗೆಯ ನೋಟ
ಜತೆ ಹೆಜ್ಜೆಯೊಳಗಿದೆ ನಿನ್ನೊಲುಮೆ..
ಚೆಲುವೆ
ನಿನ್ನ ಮುಂಗುರುಳ ಬಂಧನದಲಿ
ಆ ರವಿ ನಾಚುತ ಮುಳುಗಿದನು 
ಸಾಗರದಲೆಗಳ ಒಲವ ಸಂಗೀತಕ್ಕೆ 
ನೀನಾದೆ ಮರಳ ಹಾದಿಯ ಕವಿತೆ..

ಶುಕ್ರವಾರ, ಅಕ್ಟೋಬರ್ 23, 2020

ತಂಪಿರುಳ ನಗೆಯಲ್ಲಿ
ಮುಂಗುರುಳು ಬೆರಳುಗಳ
ಆ ಚಂದ್ರ ನಿನ್ನಾಟವನು
ಬೆಳದಿಂಗಳ ಬೆಳಕಲಿ
ಸೆರೆಹಿಡಿದ ನೋಡೆ ಸಂಗಾತಿಯೆ..

ಭಾನುವಾರ, ಅಕ್ಟೋಬರ್ 11, 2020

ಅರ್ಥಮಾಡಿಕೊಳ್ಳಲಿಲ್ಲವೆಂದು
ನೀ ಅಳುವುದೇಕೆ ಚೆಲುವ ತಾರೆ
ನಾ ಚಂದ್ರತಾರೆಯಲ್ಲ
ಬಾನಾಚೆಯಿಂದ ಇಳಿಯಲಾರೆ..

ನಾ ಭುವಿಯೊಡಲ ಆವಿಯು
ಮೋಡದೊಡನೆ ಬರುವೆನು
ನಿನ್ನ ನೋವ ತೊಳೆಯಲು
ಮಳೆಯಾಗಿ ಸುರಿವೆನು..

ಕನಸು ಕಾಣಲು ಚೆಂದವಂತೆ
ಒಪ್ಪಿ ಮನಸ್ಸು ನೀಡಲು
ನಲಿವುನೋವು ಹರಟೆ ಬೇಕು
ಪ್ರೀತಿ ಬದುಕ ತೀಡಲು..

ನೀ ನಗಲು ಜೀವದೊಲವೆ
ಹಗುರವಾಯಿತು ಎನ್ನೆದೆ
ಬೆಳಗುತಿಹ ದೀಪವಾದರೆ ನೀ
ಎಣ್ಣೆ ಬತ್ತಿಯ ತನುವು ನನ್ನದೆ..