ಭಾನುವಾರ, ಫೆಬ್ರವರಿ 23, 2020

ನೀಲಾಕಾಶವನು ತಿವಿದು
ಭೋರ್ಗರೆವ ಸಿಡಿಲು
ಧರೆಗಿಳಿದಿದೆ
ಇಳೆ ನಡುವ ಸೀಳಿ
ಹಸಿಮರವು ಬಾಡಿ
ಧರೆಗುರುಳಿದೆ

ಕರ್ಣವನು ಬಡಿದು
ತಲೆಭಾರದ ಮಾತುಗಳು
ನೆಮ್ಮದಿಯ ಕೆಡಿಸುತಿವೆ
ನಿನ್ನೊಲವಿನ ಸುಖಕ್ಕಾಗಿ
ಎದೆಗೊರಗಿ ಅಳುತಿವೆ
ನೋಡು ನಮ್ಮಿಬ್ಬರ ಕನಸು

ಯಾರ ನೋವಿನ ಶಾಪ
ಮನವು ಕದಡಿದ ಪಾಪ
ತಿಳಿಯದೇ ಈ ಸಿಡುಕು 
ಮಳೆ ಸುರಿದು ಬೆವರಳಿದು
ಹೊಸಜೀವ ಪುಟಿದೆದ್ದು
ಹಸಿರಾಗದೇ ಈ ಬದುಕು

ಶುಕ್ರವಾರ, ಫೆಬ್ರವರಿ 21, 2020

ಯಮುನೆ ಹರಿವು
ಜುಳುಜುಳು ನಾದ
ಹಸಿರ ನೆಲದ ತಂಪು
ಚಾಚಿದ ಹೂವ ಕಂಪಿನಲಿ
ಯಾರೋ ನುಡಿದಂತೆ
ಮನದಲಿ ನಡೆದಂತೆ
ಹೇಳೆ ನೀ ರಾಧೆ ನಾ..

ಶ್ರವಣವು ಅಪ್ಪಿದ ನುಡಿ
ಕಚಗುಳಿಯ ಇಂಪು
ನಿನ್ನ ಧ್ವನಿಯು
ತರುವೆ ನಾ ಕೊಳಲನು
ಮರವನೇರಿ ನಿನ್ನ ಸನಿಹ
ಸಾನಿಕ ನುಡಿಸುವೆ
ಹೇಳೆ ನೀ ರಾಧೆ ನಾ..

ನವಿಲು ನಡಿಗೆಯ ದಾರಿ
ಗರಿಯು ಶಿರವನೇರಿ
ಕೇಶವಲಂಕರಿಸಿದೆ ನಿನಗಾಗಿ
ಕೊಡುವೆಯ ಸಮಯವ
ನಡುವೆಯ ಮೌನವ
ಎದೆಗೊರಗುತ ನನ್ನ
ಕಳೆದುಕೊಳ್ಳೋಣ ಪ್ರೀತಿಯಲಿ
ಮೂಗುತ್ತಿಯೊಂದು ಮುಂಜಾನೆಯಲಿ
ಬಾವಿಯ ರಾಟೆಯ ಹರಟೆಯಲಿ
ಮರಗಳ ಎಡೆಯಲಿ ತೂರಿದ ಬೆಳಕಲ್ಲಿ
ಹೊಳೆಯುತ್ತಿತ್ತು ರಾತ್ರಿಯ ಕಥೆಯ ಹೇಳುತಿತ್ತು

ಚದುರಿದ ಕೇಶವು ಗಾಳಿಗೆ ಬಾಗುತ್ತ
ಬೆರಳಲಿ ಮಡಿಯುತ
ಕಣ್ಣು ಒಂದೆಡೆ ಹಾಯುತ
ನಾಳೆಯ ದಿನಗಳ ಎಣಿಸುತಿತ್ತು
ಚೆಲುವ ಗುಣಿಸುತಿತ್ತು ನಾರಿ ನಾಚುತಿತ್ತು

ಭಾನುವಾರ, ಫೆಬ್ರವರಿ 16, 2020

ಊರಕೇರಿಯ ದೂರ ಅವಳ ಮನೆಯು
ಬದಿಯಲೆ ನಮ್ಮ ಗದ್ದೆಯ ಭತ್ತದ ತೆನೆಯು
ನಾನಕ್ಕರೆ ಅವಳಕ್ಕರೆ ಸೇರಿ ಮಾತು
ನಡುವೆ ಸುಯಿಗುಡುವ ಗಾಳಿಮಾತು


ತೊಳೆದ ನಾಚಿಕೆ ಬೆಸೆದ ಬಂಧವು
ಬೆಳೆದ ಸಂಚಿಕೆ ಮೊಗದ ಪ್ರೀತಿಯಂದವು
ಚೆಲುವ ಬದುಕಿಗೆ ತುಂಬಿದಾಕೆ
ಬಸಿರ ಹೊತ್ತ ಕೈ ಹಿಡಿದಾಕೆ
ಅವಳು ನನ್ನವಳು 
ನಗುವ ತಂದವಳು

ಹಳ್ಳಿ ಬದುಕಿನ ನೀರೆಯವಳು
ಬೆಳ್ಳಿ ಸಾಲಿನ ತಾರೆಯವಳು
ನಮ್ಮ ಪ್ರೀತಿಯ ಸಾಕ್ಷಿ ತವರು
ಹೊಟ್ಟೆಯಲ್ಲಿ ಚಂದ್ರಚಂದ್ರಿಕೆಯರು
ಕಾತರವ ನೀಡಿದೊಡತಿ
ಹೊಳೆವ ಕಂಗಳ ಗೆಳತಿ

ನಿನ್ನ ತೊರೆದ ಬದುಕು 
ಏಕೆ ಹೇಳ ಬಲ್ಲೆಯಾ..?
ಎನ್ನ ಹೃದಯದಿ ನೀನು
ಭಾವ ತುಂಬಿ ನಿಲ್ಲೆಯಾ..?

ಹರಿವ ಜಲದೊಳು
ಸವೆಯುತಿರುವೆನು
ಹಸಿರ ನೆಲದೊಳು
ಬೆಳೆಯುತಿರುವೆನು
ಹೆಸರು ಮಾತ್ರದಿ ಗೆಳೆತನ
ಮೂಡುತಿಹುದು ಸಿಹಿತನ

ಮೂಡಣ ಬೆಳಕಲ್ಲಿ
ಕಾಂತಿಯ ಚೆಲುವಿರಲು
ದೇಹದ ಜ್ವಾಲೆಯು
ಬೆಂಕಿಯ ಹಚ್ಚಿರಲು
ಸುಡುತಿವೆ ನನ್ನ ಏಕಾಂತ
ಸುರಿವೆಯ ನೀ ಮಳೆಯಂತೆ